Tag Archives: Kannada

ಬಾಳ ಬವಣೆ

Poems take a hard time to write. Putting the thoughts across the reader in minimal set of words is yet another art. Attempting to write one helps us to get to see our thoughts personified and gives us a sense of companionship to our thought process. As J.Krishnamurti says,

You must understand the whole of life, not just one little part of it.
That is why you must read, that is why you must look at the skies,
that is why you must sing and dance, and write poems and suffer and understand,
for all that is life.

Here is a poem written by my sister..

ಮೊದಲ ಅಳುವಿನೊಂದಿಗೆ ಶುರುವಾಯಿತು ಕಥೆ
ಕೊನೆಯುಸಿರಲ್ಲಿ ಬರೀ ವ್ಯಥೆ..

ಅಮ್ಮನ ಬೆಚ್ಚನೆ ಮಡಿಲಿನಲ್ಲಿದ್ದಾಗ, ಹಸಿವು ದಾಹದ ಅರಿವಿರಲಿಲ್ಲ
ಕಣ್ಣೆದುರಿಗಿನ ವಸ್ತುವೆಲ್ಲವೂ ವಿಸ್ಮಯ, ಪ್ರತಿಯೊಂದನ್ನೂ ಕೆದಕಿ ನೊಡುವ ಹಂಬಲ
ಚಿಗುರೊಡೆದ ಮನಸ್ಸಿನ ಸಸಿಗೆ, ಎಲ್ಲವನ್ನೂ ಅನುಭವಿಸುವ ತವಕ
ಬಾಳ ಈ ತಿರುವಿನಲ್ಲಿ ಹೊರಟೆ ನೀರಿನ ಅಲೆಯೊಡನೆ..

ಈಗ ನಡೆದಂತೆಲ್ಲ ಬೆಳೆಯುತ್ತಿದೆ ದಾರಿ,
ಎಷ್ಟು ಓಡಿದರೂ ಮುಗಿಯದ ಪಯಣ
ಸರಿ ತಪ್ಪುಗಳ ಅರಿವಿಲ್ಲದೆ,
ಎಡವುತ್ತ ಸಾಗುತ್ತಲೇ ಇರುವೆ ಈ ಜನಜಂಗುಳಿಯಲ್ಲಿ..

ಜೀವನ ಜೇನಿನ ಗೂಡು ಎಂದು ನಂಬಿದ್ದೆ
ಇದು ಸುಳ್ಳೆ? ಎಂಬ ಆತಂಕ ಮೂಡಿದೆ
ಎಲ್ಲರೂ ನನ್ನವರು ಆದರೂ ಯಾರೂ ನನ್ನವರಲ್ಲ
ಎಂಬ ವಿಪರ್ಯಾಮತಿ ಬೆಳೆದಂತೆ, ಮಾಯವಾಯಿತು ಕುತೂಹಲ..

ಚಿಂತೆ ದುಃಖದ ಸುಳಿಯಲ್ಲಿ, ಎಲ್ಲರ ಪ್ರತಿದಿನ ಸಾಗುತಿದೆ
ನಗುವಿನ ಮುಖವಾಡದ ಹಿಂದೆ, ಹನಿಯೊಂದು ಕಣ್ಣ ಅಂಚಿನಲ್ಲಿದೆ
ಶಾಲೆಗಳು ಕಲಿಸದ ಸತ್ಯ, ಜೀವನ ಅರ್ಥೈಸಿದೆ
ಎಷ್ಟು ನಕ್ಕೆವೊ ಅಷ್ಟು ಕಣ್ಣೀರು ಸುರಿಸಲೇಬೇಕೆಂಬ ಕರಾರು ಬಾಳು ಮೊದಲೇ ಬರೆದಿದೆ..

ಈ ಸಂತೆಯಲ್ಲಿ, ತಮ್ಮನ್ನು ತಾವು ಅರಿತವರೇ ಧನ್ಯರು
ಜೀವನದ ತಕ್ಕಡಿಯಲ್ಲಿ, ಸುಖ ದುಃಖವನ್ನು ಸಮನಾಗಿ ತೂಗಿದವರೇ ಮಾನ್ಯರು..

ಶಾಂಭವಿ.ಕುಲಕರ್ಣಿ

Advertisements

Kannada Ode Poems

In my opinion, the three biggest assets of Kannada literature which directly link to the common man are ಭಾವಗೀತೆಗಳು, ದಾಸರ ಪದಗಳು and ಮಂಕುತಿಮ್ಮನ ಕಗ್ಗ. Each time I listen to the soulful ode poems of Kannada with amazing music composition by C.Ashwath or M.Ananthaswamy, I can’t help bowing to these Masters. Here I list my favorite 4 poems which I cannot stop listening to! (I have italicized the lines I love the most)

1. ಇದು ಬಾಳು – ಗೋಪಾಲಕೃಷ್ಣ ಅಡಿಗ

ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿದೋಣಿ;
ಬಾಳ ಗಂಗೆಯ ಮಹಾಪೂರದೊಳೂ ಸಾವಿನೊಂದು ವೇಣಿ
ನೆರೆತಿದೆ, ಬೆರೆತಿದೆ, ಕುಣಿವ ಮೊರೆವ ತೆರೆತೆರೆಗಳೋಳಿಯಲ್ಲಿ
ಜನನಮರಣಗಳ ಉಬ್ಬುತಗ್ಗು ಹೊರಳುರುಳಾಟವಲ್ಲಿ !

ಆಶೆಬೂದಿತಳದಲ್ಲು ಕೆರಳುತಿವೆ ಕಿಡಿಗಳೆನಿತೋ ಮರಳಿ,
ಮುರಿದು ಬಿದ್ದ ಮನಮರದ ಕೊರಡೊಳೂ ಹೂವು ಹೂವು ಅರಳಿ !
ಕೂಡಲಾರದೆದೆಯಾಳದಲ್ಲು ಕಂಡೀತು ಏಕಸೂತ್ರ;
ಕಂಡುದುಂಟು ಬೆಸೆದೆದೆಗಳಲ್ಲೂ ಭಿನ್ನತೆಯ ವಿಕಟಹಾಸ್ಯ !

ಎತ್ತರೆತ್ತರೆಕೆ ಏರುವ ಮನಕೂ ಕೆಸರ ಲೇಪ, ಲೇಪ;
ಕೊಳೆಯು ಕೊಳೆಚೆಯಲಿ ಮುಳುಗಿ ಕಂಡನೋ ಬಾನಿನೊಂದು ಪೆಂಪ;
ತುಂಬುಗತ್ತಲಿನ ಬಸಿರನಾಳುತಿದೆ ಒಂದು ಅಗ್ನಿ ಪಿಂಡ;
ತಮದಗಾಧ ಹೊನಲಲ್ಲು ಹೊಳೆಯುತಿದೆ ಸತ್ವವೊಂದಖಂಡ !

ಇದನರಿತಂದೆ; ಆ ಅರಿವುಕಿರಣವನೆ ನುಂಗಿತೊಂದು ಮೇಘ;
ಆ ಮುಗಿಲ ಬಸಿರನೇ ಬಗೆದು ಬಂತು ನವಕಿರಣವೊಂದಮೋಘ !
ಹಿಡಿದ ಹೊನ್ನೆ ಮಣ್ಣಹುದು ! ಮಣ್ಣೊಳೂ ಹೊಳೆದುದುಂಟು ಹೊನ್ನು;
ಇದು ಹೀಗೆ ಎಂಬ ನಂಬುಗೆಯ ಊರುಗೋಲಿಲ್ಲ ಇನ್ನು ಮುನ್ನು !

ಆಶೆಯೆಂಬ ತಳವೊಡೆದ ದೋಣಿಯಲಿ ದೂರತೀರಯಾನ;
ಯಾರ ಲೀಲೆಗೋ ಯಾರೋ ಏನೋ ಗುರಿಯಿರದೆ ಬಿಟ್ಟ ಬಾಣ !
ಇದು ಬಾಳು ನೋಡು; ಇದ ತಿಳಿದನೆಂದರೂ ತಿಳಿದ ಧೀರನಿಲ್ಲ;
ಹಲವುತನದ ಮೈಮರೆಸುವಾಟವಿದು; ನಿಜವು ತೋರದಲ್ಲ !

ಬೆಂಗಾಡು ನೋಡು ಇದು; ಕಾಂಬ ಬಯಲುದೊರೆಗಿಲ್ಲ ಆದಿ-ಅಂತ್ಯ;
ಅದ ಕುಡಿದೆನೆಂದ ಹಲರುಂಟು; ತಣಿದೆನೆಂದವರ ಕಾಣೆನಯ್ಯ !
ಅರೆಬೆಳಕಿನಲ್ಲಿ ಬಾಳಲ್ಲಿ ಸುತ್ತಿನಾವೇಕೋ ಮಲೆತು, ಮೆರೆದು,
ಕೊನೆಗೆ ಕರಗುವೆವು ಮರಣತೀರಘನ ತಿಮಿರದಲ್ಲಿ ಬೆರೆತು !

2. ಮುಚ್ಚು ಮರೆ ಇಲ್ಲದೆಯೇ – ಕುವೆಂಪು

ಮುಚ್ಚು ಮರೆ ಇಲ್ಲದೆಯೇ ನಿನ್ನಮುಂದೆಲ್ಲವನು ಬಿಚ್ಚಿಡುವೇ ಓ ಗುರುವೇ ಅಂತರಾತ್ಮ
ಪಾಪವಿದೆ ಪುಣ್ಯವಿದೆ , ನರಕವಿದೆ ನಾಕವಿದೆ, ಸ್ವೀಕರಿಸು ಓ ಗುರುವೇ ಅಂತರಾತ್ಮ

ರವಿಗೆ ಕಾಂತಿಯನೀವ ನಿನ್ನ ಕಣ್ಣೀಕ್ಷಿಸಲು, ಪಾಪ ತಾನುಳಿಯುವುದೇ ಪಾಪವಾಗಿ
ಗಂಗೆ ತಾನುದ್ಭವಿಪ ನಿನ್ನಡಿಯ ಸೋಂಕಿಂಗೇ, ನರಕ ತಾನುಳಿಯುವುದೇ ನರಕವಾಗಿ

ಸಾಂತ ರೀತಿಯನೆಮ್ಮೀ ಕದಡಿರುವುದೆನ್ನಾತ್ಮ, ನಾಂತರೀತಿಯು ಅದೆಂತೋ ಓ ಅನಂತ
ನನ್ನ ನೀತಿಯ ಕುರುಡಿನಿಂದೆನ್ನ ರಕ್ಶಿಸಯ್, ನಿನ್ನ ಪ್ರೀತಿಯ ಬೆಳಕಿನ ಆನಂದಕೆ

3. ಓ ನನ್ನ ಚೇತನ – ಕುವೆಂಪು

ಓ ನನ್ನ ಚೇತನ
ಆಗು ನೀ ಅನಿಕೇತನ

ನೂರು ಮತದ ಹೊಟ್ಟ ತೂರಿ
ಎಲ್ಲ ತತ್ವದೆಲ್ಲೆ ಮೀರಿ
ನಿರ್ದಿಗಂತವಾಗಿ ಏರಿ

ಎಲ್ಲಿಯೂ ನಿಲ್ಲದಿರು
ಮನೆಯನೆಂದು ಕಟ್ಟದಿರು
ಕೊನೆಯನೆಂದು ಮುಟ್ಟದಿರು
ಓ ಆನಂತವಾಗಿರು

ಅನಂತ ತಾನನಂತವಾಗಿ
ಆಗುತಿಹನೆ ನಿತ್ಯಯೋಗಿ
ಅನಂತ ನೀ ಅನಂತವಾಗು
ಆಗು ಆಗು ಆಗು ಆಗು

4. ಕಾಣದ ಕಡಲಿಗೆ ಹಂಬಲಿಸಿದೆ ಮನ – ಜಿ. ಎಸ್. ಶಿವರುದ್ರಪ್ಪ

ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣಬಲ್ಲೆನೆ ಒಂದುದಿನ
ಕಡಲನು ಕೂಡಬಲ್ಲೆನೆ ಒಂದುದಿನ

ಕಾಣದ ಕಡಲಿನ ಮೊರೆತದ ಜೋಗುಳ ಒಳಗಿವಿಗಿಂದು ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೆ ಚಿತ್ರಿಸಿ ಚಿಂತಿಸಿ ಸುರಿಯುತಿದೆ
ಎಲ್ಲಿರುವುದೊ ಅದು , ಎಂತಿರುವುದೊ ಅದು
ನೋಡಬಲ್ಲೆನೆ ಒಂದುದಿನ ಕಡಲನು ಕೂಡಬಲ್ಲೆನೆ ಒಂದುದಿನ

ಸಾವಿರ ಹೊಳೆಗಳು ತುಂಬಿ ಹರಿದರು ಒಂದೇಸಮನಾಗಿಹುದಂತೆ
ಸುನೀಲ ವಿಸ್ತರ ತರಂಗಶೋಭಿತ ಗಂಭಿರಾಂಬುಧಿ ತಾನಂತೆ
ಮುನ್ನೀರಂತೆ , ಅಪಾರವಂತೆ
ಕಾಣಬಲ್ಲೆನೆ ಒಂದುದಿನ,ಅದರೊಳು ಕರಗಲಾರೆನೆ ಒಂದುದಿನ

ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆಯು ನಾನು
ಎಂದಿಗಾದರು ಕಾಣದ ಕಡಲನು ಸೇರಬಲ್ಲೆನೇನು
ಸೇರಬಹುದೆ ನಾನು,ಕಡಲ ನೀಲಿಯೊಳು, ಕರಗಬಹುದೆ ನಾನು